ಕೂಪ್‍ಫರಾನ್	
ಇಂಗಾಲೇತರ ರಾಸಾಯನಿಕ ಕ್ರಿಯೆಗಳಲ್ಲಿ ಬಳಸುವ ಇಂಗಾಲ ವಸ್ತು. ಇದರ ಅಣುಸೂತ್ರ C6H5N(NO)ONH4 ಇದು ಓ—ನೈಟ್ರೊಸೋಫೀನೈಲ್ ಹೈಡ್ರಾಕ್ಸಿಲ್ ಅಮೀನಿನ ಅಮೋನಿಯಂ ಲವಣ. ಈಥರಿನಲ್ಲಿ ಕರಗಿಸಿದ ಫೀನೈಲ್ ಹೈಡ್ರಾಕ್ಸಿಲ್ ಅಮೀನ್ ಮತ್ತು ಟಿ- ಬ್ಯೂಟೈಲ್ ನೈಟ್ರೈಟುಗಳ ದ್ರಾವಣದಲ್ಲಿ ಅಮೋನಿಯ ಅನಿಲವನ್ನು ಹಾಯಿಸಿದಾಗ ಈ ವಸ್ತು ಏರ್ಪಡುತ್ತದೆ. ಇದರ ಬಣ್ಣ ಕಂದುಮಿಶ್ರಿತ ಬಿಳಿ. ಸ್ಫಟಿಕದಂಥ ವಸ್ತು. ನೀರಿನಲ್ಲಿ ಸುಲಭವಾಗಿ ವಿಲೀನವಾಗುತ್ತದೆ. ಇದು ತಾಮ್ರ. ಕಬ್ಬಿಣ, ತವರ, ಅಲ್ಯೂಮಿನಿಯಂ, ಥೋರಿಯಂ ಇತ್ಯಾದಿ ಲೋಹಗಳ ಲವಣಗಳ ದ್ರಾವಣದೊಂದಿಗೆ ರಾಸಾಯನಿಕ ಕ್ರಿಯೆಗೆ ತೊಡಗಿ ನೀರಿನಲ್ಲಿ ವಿಲೀನವಾಗದ ಆಯಾ ಲೋಹಗಳ ಒತ್ತರಗಳನ್ನು ಹೊರಗೆಡಹುತ್ತದೆ. ಈ ಒತ್ತರಗಳ ತೂಕದಿಂದ ಆಯಾ ಲೋಹಗಳ ನಿಷ್ಪತ್ತಿಯನ್ನು ನಿರ್ಧರಿಸಬಹುದು. ತಾಮ್ರ ಮತ್ತು ಕಬ್ಬಿಣದ ಅಂಶ ಕಂಡುಹಿಡಿಯುವ ಪ್ರಯೋಗಗಳಿಗೆ ಈ ವಸ್ತುವನ್ನು ಅತಿ ಹೆಚ್ಚಾಗಿ ಉಪಯೋಗಿಸುತ್ತಾರೆ. ತಾಮ್ರದೊಂದಿಗೆ ಕಾಪರ್ ಕೂಪ್‍ಫೆರೊನೇಟ್ ಮತ್ತು ಕಬ್ಬಿಣದೊಂದಿಗೆ ಫೆರ್ರಿಕ್ ಕೂಪ್‍ಫೆರೊನೇಟ್ ಎಂಬ ಒತ್ತರಗಳುಂಟಾಗುತ್ತವೆ.  
                                                                     (ಎಂ.ಆರ್.ಸಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ